Dear Visitors,

ಜೀವನದ ಹಾದಿಯಲ್ಲಿ ಸಾಗುತ್ತಾ ದೈನಂದಿನ ಬದುಕಿನ ವಿವಿಧ ಹಂತಗಳನ್ನು ದಾಟುತ್ತ ಹೋದಂತೆ ಮನಸ್ಸಿಗೆ ಹಲವು ವಿಚಾರಗಳು ಆಳವಾಗಿ ನಾಟುತ್ತ ಹೋದವು. ಕಾಲಸರಿದಂತೆ ಈ ವಿಚಾರಗಳನ್ನು ಮೆಲಕುಹಾಕುತ್ತ ಹೋದಂತೆ ಪರಿ ಪರಿಯಾದ ತೀರ್ಮಾನಗಳಿಗೆ ತಲುಪಿದೆ. ಇವೆಲ್ಲ ಮನದಲ್ಲಿ ಹೊಸದಾಗಿ ಬೇರು ಊರಿದವು. ಒಂದು ರೀತಿಯ ವ್ಯಯಕ್ತಿಕವಾದ ವಿಚಾರಧಾರಣೆಗೆ ಕಾರಣವಾದವು. ನನಗೆ ಮುಂದೆ ಕಂಡಿದ್ದು ಸ್ವಯಂ ಅನ್ವೇಷಣೆಯ ಮಾರ್ಗ ಒಂದೇ. ಇದು ನನಗಿರುವ “ಒಂದೇ ದಾರಿ” ಎಂದು ಮನವರಿಕೆ ಮಾಡಿಕೊಂಡೆ.

ಹೀಗೆ ಮುಂದೆ ಹೆಜ್ಜೆ ಹೆಜ್ಜೆಯಾಗಿ ಸಾಗುತ್ತ ಹೋದಂತೆ ಮನದಲ್ಲಿ ಈ ವಿಚಾರಧಾರೆಯು ಪಕ್ವ ರೂಪವನ್ನು ಪಡೆಯಿತು. ಇದೊಂದು ನಿರಂತರ ಹರೆಯುವ ವಿಚಾರಗಳ ಧಾರೆಯಾಯಿತು. ಇದು ಯಾವುದೇ ಒಂದು ವರ್ಗಕ್ಕೆ ಸೀಮಿತವಲ್ಲದ್ದು.

ನಾನು ಕಂಡುಕೊಂಡಿದ್ದು ಈ “ಒಂದೇ ದಾರಿ”ಯನ್ನು, ನಿಮಗೂ ಬಹುಷ್ಯಕಂಡುಬರುವುದು ಒಂದೇ ದಾರಿ, ಆದರೂ ಇವು ವ್ಯಯಕ್ತಿಕವಾದ ದಾರಿಗಳು. ಧ್ಯೇಯ ಒಂದೇ. ಎಲ್ಲರೂ ಈ ದಾರಿಯಲ್ಲಿ ಪಯಣಿಸುತ್ತ ಅಧ್ಯಾತ್ಮಿಕ ಜಾಗೃತಿಗೆ ಒಳಪಡುವೆವು ಎಂದು ಭಾವಿಸುತ್ತೇನೆ.

ಓದುಗರಿಗೆ ಒಂದುಕಿರುಸೂಚನೆ ಕೊಡಬಯಸುತ್ತೇನೆ. ಅದೇನೆಂದರೆ, ನಾನು ಆಧ್ಯಾತ್ಮಿಕ ಜಾಗೃತಿ ಎಂದಾಗ ಯಾವುದೇ ಒಂದು ಧರ್ಮಕ್ಕೆ ಅಥವಾ ಪಂಥಕ್ಕೆ ಸೀಮಿತಗೊಳಿಸಲು ಇಚ್ಛಿಸುವುದಿಲ್ಲ. ಅವರವರಿಗೆ ಅವರವರದ್ದೇ ಆದ ರೀತಿಯಲ್ಲಿ ಆಧ್ಯಾತ್ಮದ ಜಾಗೃತಿ ಆಗಲೆಂದು ನನ್ನ ಹೃತ್ಪೂರ್ವಕ ಹಾರೈಕೆ. ನಾನು ಸಾಗಿದ ಪಥದಲ್ಲಿ ಎಲ್ಲಾ ಮನುಜರ ಸಮಾಗಮ ಇದೆ. ಬೇಧ ಭಾವಕ್ಕೆ ಆಸ್ಪದವಿಲ್ಲ. ಸಾರ್ವತ್ರಿಕ ಸತ್ಯದೆಡೆಗೆ ಇದು ಪಯಣ. ಸಂಕುಚಿತ ಮನೋಭಾವಕ್ಕಾಗಲಿ ವಿಚಾರಗಳಿಗಾಗಲಿ ಆಸ್ಪದವಿಲ್ಲ. ಇದು ಹೀಗೆ ಸ್ವೇಚ್ಛೆಯಿಂದ ಎಲ್ಲರನ್ನೂ ಒಡಗೂಡಿಸಿಕೊಂಡು ಸಾಗಲೆಂದು ಹಾರೈಸುವೆ.

ಹೇಗೆ? ಎಂತು? ಎಲ್ಲಿ? ಯಾಕೆ? ಇವೆಲ್ಲವನ್ನೂ ಓದುಗರೇ ಪ್ರಶ್ನಿಸಿಕೊಂಡು ಉತ್ತರಗಳನ್ನು ಹುಡುಕಿಕೊಳ್ಳಬೇಕು, ಅವರವರ ಸ್ವಂತ ದಾರಿಯಲ್ಲಿ ಸಾಗಬೇಕು. ನಿಮ್ಮ ವ್ಯಯಕ್ತಿಕವಾದ ದಾರಿಯನ್ನುಹುಡುಕಿಕೊಂಡು ಸಾಗಿದಾಗ ಪ್ರಶ್ನೆಗಳು, ಉತ್ತರಗಳು, ಅರಿವುಗಳು ಎಲ್ಲವೂ ಮಿಶ್ರಿತವಾಗಿ ನಿಮಗೆ ನಿಮ್ಮದೇಯಾದ ಸಾಕ್ಷಾತ್ಕಾರವಾಗಲೆಂದು ಅಭಿಲಾಷೆ ನನ್ನದು.

ಇನ್ನೊಂದೆಡೆ ಈನನ್ನ ವಿಚಾರಧಾರೆಯನ್ನು ಒಪ್ಪದವರೂ, ಇಷ್ಟಪಡದವರೂ ಇರುತ್ತಾರೆ ಎಂದು ಅರಿವಿದೆ, ಆದ್ದರಿಂದ ನಿಮಗಾರಿಗೂ ನೋವನ್ನುಂಟುಮಾಡುವುದಾಗಲಿ, ನಿಮ್ಮ ವ್ಯಯಕ್ತಿಕ ವಿಚಾರಧಾರೆ ತಪ್ಪೆಂದು ಹೇಳುವುದಾಗಲಿ ನನ್ನ ಉದ್ದೇಶವಲ್ಲ ಎಂದು ಸ್ಪಷ್ಟ ಹೇಳಬಯಸುತ್ತೇನೆ. ಎಲ್ಲರೂ ಒಂದೇ ಮೂಲದಿಂದ ಬಂದವರು, ಎಲ್ಲರ ಧ್ಯೇಯ ಕಡೆಗೆ ಅದೇ ಮೂಲದೆಡೆಗೆ ಕರೆದೊಯ್ಯುವುದೆಂದು ಬಲವಾಗಿ ನಂಬಿದ್ದೇನೆ ಅಷ್ಟೇ.

ಇಲ್ಲಿ ಪ್ರಸ್ತುತಪಡಿಸಲು ಹೊರಟಿರುವ ವಿಚಾರಗಳು ಬರೀ ಒಂದು ಮಾರ್ಗಸೂಚಿಯಂತೆ. ಈ ಮಾರ್ಗಸೂಚಕ ನಿಮಗೆ ಸೂಕ್ತವಲ್ಲವೆಂದನಿಸಿದರೆ ಇದನ್ನು ನಿರ್ಲಕ್ಷಿಸಿ, ಪರಿಗಣಿಸದೇ ನಿಮ್ಮ ದಾರಿಯನ್ನು ಮುಂದುವರಿಸಿ. ಸೂಕ್ತವೆನಿಸಿದರೆ ನಿಮಗೆ ಮನವರಿಕೆಯಾದಂತೆ ಉಪಯೋಗಿಸಿಕೊಳ್ಳಿ ಎಂದು ಹೇಳುತ್ತ, ಎಲ್ಲರಿಗೂ ಶುಭವಾಗಲಿ ಎಂದು ಕೋರುತ್ತೇನೆ.

ನಾನು ವ್ಯಯಕ್ತಿಕವಾಗಿ ಹುಡುಕಿಕೊಂಡು ಸಾಗಿದ ದಾರಿಯಲ್ಲಿ ಅರಿತುಕೊಂಡ ವಿಚಾರಗಳ ಸಂಕಲನವೇ “ಮನಸ್ಸಿಗೆ ಬಂದಂತೆ”. ವ್ಯಯಕ್ತಿಕವಾದ ವಿಚಾರಗಳನ್ನು ಬೆಳೆಸಿಕೊಳ್ಳುತ್ತ ಹೋದಂತೆ ಅವನ್ನು ಗಹನವಾಗಿ ಆಲೋಚಿಸಿದಂತೆ ವ್ಯಾವಹಾರಿಕ ಜಗತ್ತಿನ ದೈನಂದಿನ ಕಾರ್ಯಾಚರಣೆಯ ಪರಿಣಾಮವಾಗಿ ಮನವನ್ನು ಆವರಿಸಿಕೊಂಡ ಕಾರ್ಗತ್ತಲು ಸತ್ಯದ ಅಗ್ನಿಜ್ವಾಲೆಯ ತೀವ್ರತೆಯೆದುರು ಹಂತ ಹಂತವಾಗಿ ಮರೆಯಾಯಿತು. ಅಂತೆಯೇ ಎಲ್ಲಾ ವಿಚಾರಗಳನ್ನು ಒಮ್ಮೆಗೇ ಪ್ರಸ್ತುತ ಪಡಿಸಿದರೆ ಓದುಗರಿಗೆ ಉಪಯೋಗವಾಗದೆಂದು ಅನಿಸಿತು, ಆದ್ದರಿಂದ ಮೊದಲಿಗೆ ನೂರು ದಿನಗಳ ಕಾಲ ದಿನಕ್ಕೆ ಒಂದಂತೆ ಪ್ರಕಟಿಸುವ ಪ್ರಯತ್ನ ಮಾಡುವೆ. ಅಂತೆಯೇ ಓದುಗರ ಮನವನ್ನೂ ಸತ್ಯಾಗ್ನಿಯ ಜ್ವಾಲೆಯು ಪ್ರಕಾಶಿಸಲಿ ಎಂಬ ಆಶಿಸುತ್ತೇನೆ. ಅಲ್ಲಿಂದ ಮುಂದೆ ಅದಾದ ನಂತರದ ಮಾತು.

ಸತ್ಯಾಗ್ನಿಯಲ್ಲಿ ಬೆಂದ ಮನದಾಳದಿಂದ…